Deeksha Ramakrishna

ನಮ್ಮ ಶಿಕ್ಷಣ ಸಂಸ್ಥೆಯ ಪ್ರತಿಭೆಯ ಚಿಲುಮೆ ವಿದುಷಿ ಕುಮಾರಿ ದೀಕ್ಷಾ ರಾಮಕೃಷ್ಣ

ಮಂಗಳೂರಿನ ಮುಕ್ಕದಲ್ಲಿರುವ ಶ್ರೀನಿವಾಸ್ ಸ್ಕೂಲ್ ಆಫ್ ಇಂಜಿನಿಯರಿಂಗ್‍ನ ನಾಲ್ಕನೇಯ ವರ್ಷದ ಕಂಪ್ಯೂಟರ್ ಸೈನ್ಸ್ ಆಂಡ್ ಇಂಜಿನಿಯರಿಂಗ್ ವಿದ್ಯಾರ್ಥಿನಿ ವಿದುಷಿ ಕುಮಾರಿ ದೀಕ್ಷಾ ರಾಮಕೃಷ್ಣರವರು ರಾಜ್ಯ ಮತ್ತು ರಾಷ್ಟ್ರದಾದ್ಯಂತ ಹೆಸರು ಮಾಡಿರುವ ಯುವ ಪ್ರತಿಭೆ. ನಮ್ಮ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗಮಾಡುತ್ತಿರುವ ಕುಮಾರಿ ದೀಕ್ಷಾರವರ ಸಾಧನೆಗಳ ಕಿರುಚಿತ್ರಣ ಇಲ್ಲಿದೆ.

ಕಾಲೇಜಿನ ಉಪಪ್ರಾಂಶುಪಾಲರಾದ ಯಕ್ಷಗಾನದಲ್ಲಿ ಪ್ರಸಿದ್ಧಿಯನ್ನು ಪಡೆದ ಕೆರೆಮನೆ ಮೂಲದ ಡಾ. ರಾಮಕೃಷ್ಣ ಹೆಗಡೆ ಮತ್ತು “ನೃತ್ಯ ಕಲಾ ಸಿಂಧು” ವಿದುಷಿ ಶ್ರೀಮತಿ ಯಶಾ ರಾಮಕೃಷ್ಣ ದಂಪತಿಗಳ ಸುಪುತ್ರಿ ಕುಮಾರಿ ದೀಕ್ಷಾ ಭರತನಾಟ್ಯ, ಮೋಹಿನಿ ಅಟ್ಟಂ, ಕರ್ನಾಟಕ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಜಾನಪದ ಗೀತೆ ಮತ್ತು ಚಲನಚಿತ್ರ ಗೀತೆಗಳ ಹಾಡುಗಾರಿಕೆಯಲ್ಲಿ ಪ್ರಾವೀಣ್ಯತೆಯನ್ನು ಪಡೆದ ರಾಜ್ಯದ ಹೆಮ್ಮೆಯ ಪ್ರತಿಭೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯವರು ನಡೆಸಿದ ಕರ್ನಾಟಕ ಶಾಸ್ತ್ರೀಯ “ಸೀನಿಯರ್” ವಿಭಾಗದ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನವನ್ನು ಪಡೆದ ಖ್ಯಾತಿ ಇವರದಾಗಿದೆ. ಕಳೆದ 17 ವರ್ಷಗಳಿಂದ ನೃತ್ಯ ಮತ್ತು ಸಂಗೀತ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹಲವಾರು ಬಹುಮಾನ ಮತ್ತು ಪ್ರಶಸ್ತಿಗಳನ್ನು ಪಡೆದು ಹೆತ್ತವರಿಗೆ ಮತ್ತು ನೃತ್ಯ-ಸಂಗೀತ ಕಲಿಸಿದ ಗುರುಗಳಿಗೆ ಕೀರ್ತಿಯನ್ನು ತಂದುಕೊಟ್ಟಿರುವ ಸಾಧಕಿ. ಶಾಸ್ತ್ರೀಯ ನೃತ್ಯ ಮತ್ತು ಸುಗಮ ಸಂಗೀತ ಈ ಎರಡೂ ಕ್ಷೇತ್ರಗಳಲ್ಲಿ ರಾಜ್ಯಮಟ್ಟದಲ್ಲಿ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು ಮತ್ತು ರಾಜ್ಯ ಅಕಾಡೆಮಿಗಳು ಇದರ ವತಿಯಿಂದ ಪ್ರಥಮ ಸ್ಥಾನ ಪಡೆದು ಕಲಾ ಪ್ರತಿಭೋತ್ಸವ-2003ರಲ್ಲಿ “ಬಾಲಪ್ರತಿಭೆ” ಮತ್ತು “ಕಿಶೋರ ಪ್ರತಿಭೆ” ಪ್ರಶಸ್ತಿಗಳನ್ನು ಪಡೆದಿರುವ ಏಕೈಕ ಪ್ರತಿಭೆ ಕುಮಾರಿ ದೀಕ್ಷಾ ರಾಮಕೃಷ್ಣರವರು. “ಕಲೆಯ ದೀಕ್ಷೆ”ಯನ್ನು ಹೊಂದಿದ ದೀಕ್ಷಾ ರಾಮಕೃಷ್ಣರವರು ತನ್ನ ಹತ್ತು ವರ್ಷ ಪ್ರಾಯದಲ್ಲಿಯೇ “ಭರತನಾಟ್ಯ ಪ್ರವೀಣೆ” ಎನಿಸಿಕೊಂಡ ನಮ್ಮ ನಾಡಿನ ಹೆಮ್ಮೆಯ ಪ್ರತಿಭೆ. “ಏಕವ್ಯಕ್ತಿ ಭರತನಾಟ್ಯ” ಕಾರ್ಯಕ್ರಮವನ್ನು ಸಮರ್ಥವಾಗಿ ನೀಡಬಲ್ಲ ದೀಕ್ಷಾರವರು ಅಷ್ಟೇ ಸಮರ್ಥವಾಗಿ “ನಟುವಾಂಗ”ವನ್ನೂ ನಿರ್ವಹಿಸಬಲ್ಲಳು. ತನ್ನ ನಾಲ್ಕು ವರ್ಷದ ಬಾಲ್ಯಾವಸ್ಥೆಯಲ್ಲಿಯೇ ತನ್ನ ತಾಯಿ, “ಹೆಜ್ಜೆ-ಗೆಜ್ಜೆ ಅಕಾಡೆಮಿ (ರಿ)” ಯ ನಿರ್ದೇಶಕಿ ಯಶಾ ರಾಮಕೃಷ್ಣರವರಲ್ಲಿ ಭರತನಾಟ್ಯ ಅಭ್ಯಾಸವನ್ನು ಪ್ರಾರಂಭಿಸಿ, ಯಶಸ್ಸನ್ನು ಗಳಿಸಿದ ಪ್ರಬುದ್ಧ ಕಲಾವಿದೆ. “ಬೆಳೆವ ಸಿರಿ ಮೊಳಕೆಯಲ್ಲಿ” ಎಂಬ ಉಕ್ತಿಗೆ ಸೂಕ್ತ ನಿದರ್ಶನ ಕುಮಾರಿ ದೀಕ್ಷಾ ರಾಮಕೃಷ್ಣರವರು. ಪ್ರಖ್ಯಾತ ಗುರುಗಳಾದ ಶ್ರೀ ಮಧೂರು ಪಿ. ಬಾಲಸುಬ್ರಹ್ಮಣ್ಯಂರವರಲ್ಲಿ ಸಂಗೀತ ಮತ್ತು ಕೇರಳದ ನೀಲೇಶ್ವರದ ಶ್ರೀ ರಾಜೂ ಮಾಸ್ಟರ್‍ರವರಲ್ಲಿ ಮೋಹಿನಿ ಅಟ್ಟಂ ನೃತ್ಯವನ್ನು ಕುಮಾರಿ ದೀಕ್ಷಾ ಕರಗತಮಾಡಿಕೊಂಡಿದ್ದಾರೆ.

ಮೂರನೇಯ ತರಗತಿಯಲ್ಲಿ ಅಭ್ಯಾಸಮಾಡುತ್ತಿರುವ ಸಂದರ್ಭದಲ್ಲಿ ದೀಕ್ಷಾ ರಾಮಕೃಷ್ಣರವರು ಪರ್ಯಾಯ ಶ್ರೀ ಪಲಿಮಾರು ಹೃಷಿಕೇಶ ಮಠಾಧೀಶರಾದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಆಶ್ರಯದಲ್ಲಿ ಪ್ರಚುರಪಡಿಸಿದ “ನೃತ್ಯ ವಾಹಿನಿ” ಮಾಸಿಕ ಸರಣಿಯ ಕಾರ್ಯಕ್ರಮದಲ್ಲಿ ಸುಮಾರು ಒಂದೂಕಾಲು ಗಂಟೆಯ “ಏಕವ್ಯಕ್ತಿ” ಭರತನಾಟ್ಯ ಕಾರ್ಯಕ್ರಮವನ್ನು ಅದ್ಭುತವಾಗಿ ಪ್ರದರ್ಶಿಸಿ, ನೆರೆದ ಬಹುಸಂಖ್ಯೆಯ ಕಲಾರಸಿಕರಿಂದ ಮುಕ್ತಕಂಠದಿಂದ ಪ್ರಶಂಸಿಸಲ್ಪಟ್ಟ ಆ ಕ್ಷಣ ನಿಜಕ್ಕೂ ಅದ್ಭುತ. 8ನೇಯ ಕಿರುವಯಸಿನಲ್ಲಿ ತನ್ನ ವಯೋಮಾನಕ್ಕೆ ತುಸು ಭಾರ ಎನಿಸಿದ ಈ ಕಾರ್ಯಕ್ರಮವು ದೀಕ್ಷಾಳ ಆಸಕ್ತಿ, ಅಂತ:ಶಕ್ತಿಯ ಪರಿಚಯವನ್ನು ಪ್ರೇಕ್ಷಕರಿಗೆ ಮಾಡಿಕೊಟ್ಟಿತು. ಒಂದು ಸಾಂಪ್ರದಾಯಿಕ ಭರತನಾಟ್ಯ ಕಾರ್ಯಕ್ರಮದಲ್ಲಿರಬೇಕಾದ ಹೆಚ್ಚಿನ ಎಲ್ಲಾ ನೃತ್ಯ ಬಂಧಗಳೂ ಈ ಕಾರ್ಯಕ್ರಮದಲ್ಲಿ ಒಳಗೊಂಡಿದ್ದು, ಭರತನಾಟ್ಯದ ಮೂಲದ್ರವ್ಯಗಳಾದ ನೃತ್ಯ-ಅಭಿನಯಗಳನ್ನು ದೀಕ್ಷಾ ತನ್ನ ವಯೋಮಿತಿಗೆ ಮೀರಿ ಪ್ರದರ್ಶಿಸಿದಳು. ಕಾರ್ಯಕ್ರಮದ ಪ್ರಾರಂಭದಲ್ಲಿ ದೀಕ್ಷಾರವರು ಪುಷ್ಪಾಂಜಲಿ, ರಾಗಮಲಿಕೆ ಮಿಶ್ರಛಾಪು ತಾಳದ ಜತಿಸ್ವರ, ಕಲ್ಯಾಣವಸಂತ ರಾಗದ ಆದಿತಾಳದ ಹನುಮಂತ-ಸೀತೆಯರ ಕಥಾನಕವಿರುವ ಪದವರ್ಣ, ಜಗದೋದ್ಧಾರನ ದೇವರನಾಮ, ಭೋ ಶಂಭೋಕೃತಿ ಹಾಗೂ ಪೂರ್ಣಚಂದ್ರಿಕೆಯ ತಿಲ್ಲಾನಗಳನ್ನು ತನ್ನ ನೃತ್ಯದಲ್ಲಿ ಪ್ರದರ್ಶಿಸಿದರು. ತನ್ನ ಚುರುಕು ಗತಿಯ ಹೆಜ್ಜೆಗಾರಿಕೆಯಿಂದ, ಕ್ಲಿಷ್ಟಕರ ಜತಿಗಳಿಂದ ಕೂಡಿದ ನೃತ್ಯಭಾಗವನ್ನೂ, ಹನುಮಂತ-ಯಶೋಧೆ-ಕೃಷ್ಣ-ಈಶ್ವರರ ಪಾತ್ರಗಳನ್ನು ತನ್ನ ಮನೋಧರ್ಮ ಅಭಿನಯ ವೈವಿಧ್ಯದಿಂದಲೂ ದೀಕ್ಷಾ ವೇದಿಕೆಯಲ್ಲಿ ಮೆರೆದಳು.

ನೃತ್ಯದಲ್ಲಿ ರಾಜ್ಯ ಸರಕಾರದ ವತಿಯಿಂದ ಶಿಷ್ಯವೇತನ ಮತ್ತು ನವದೆಹಲಿಯ ಸಾಂಸ್ಕ್ರತಿಕ ಸಂಪನ್ಮೂಲ ಮತ್ತು ತರಬೇತಿ ಕೇಂದ್ರದ ವತಿಯಿಂದ ರಾಷ್ಟ್ರೀಯ ಶಿಷ್ಯವೇತನ, 2006ರಲ್ಲಿ ಮೋಹಿನಿ ಆಟ್ಟಂ ನೃತ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಸಾಧನೆಗಾಗಿ ಮದ್ರಾಸು ತೆಲುಗು ಅಕಾಡೆಮಿ ಪ್ರಧಾನಮಾಡಿರುವ ಪ್ರತಿಷ್ಠಿತ ರಾಷ್ಟ್ರಮಟ್ಟದ “ಸಮೈಕ್ಯ ಭಾರತ್ ಗೌರವ್ ಸತ್ಕಾರ” ಪ್ರಶಸ್ತಿಯನ್ನು ಪಡೆದ ದೀಕ್ಷಾ ರಾಮಕೃಷ್ಣರವರು 2007ರಲ್ಲಿ ಈಟಿವಿ ಕನ್ನಡ ವಾಹಿನಿ ಆಯೋಜಿಸಿದ ಪ್ರಖ್ಯಾತ ಚಲನಚಿತ್ರ ಹಿನ್ನಲೆಗಾಯಕ ಪದ್ಮಭೂಷಣ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ನಡೆಸಿಕೊಟ್ಟ ಪಂಚಕೋಟಿ ಕನ್ನಡಿಗರ ಗಮನ ಸೆಳೆದ “ಎದೆ ತುಂಬಿ ಹಾಡುವೆನು” ಸಂಗೀತ ಸ್ಪರ್ಧೆಯಲ್ಲಿ “ಶ್ರೇಷ್ಠ ಗಾಯಕಿ” ಮತ್ತು ಪ್ರಥಮ ಸ್ಥಾನವನ್ನು ಪಡೆದು ಪ್ರಖ್ಯಾತ ಹಿನ್ನಲೆ ಗಾಯಕಿ ಪದ್ಮವಿಭೂಷಣ ಶ್ರೀಮತಿ ಪಿ. ಸುಶೀಲಾ ರವರಿಂದ ಮೆಚ್ಚುಗೆಯನ್ನು ಪಡೆದಿದ್ದಾರೆ.

ತನ್ನ ಸಾಧನೆಯ ಯಶೋಗಾಥೆಯನ್ನು ಮುಂದುವರಿಸಿಕೊಂಡು ಹೋದ ಕುಮಾರಿ ದೀಕ್ಷಾರವರು 2012ನೇಯ ಇಸವಿಯಲ್ಲಿ ಈಟಿವಿ “ಎದೆ ತುಂಬಿ ಹಾಡುವೆನು” ಕಾರ್ಯಕ್ರಮದಲ್ಲಿ ಮತ್ತೊಮ್ಮೆ ಪ್ರಥಮ ಸ್ಥಾನವನ್ನು ಪಡೆದು “ಚ್ಯಾಲೆಂಜರ್ಸ್ ಟ್ರೋಫಿ”ಯನ್ನು ತನ್ನದಾಗಿಸಿಕೊಂಡು ಕನ್ನಡ ಚಿತ್ರರಂಗದ ಹಿರಿಯ ನಟ ಶ್ರೀನಾಥ್, ಸಂಗೀತ ಕ್ಷೇತ್ರದ ದಿಗ್ಗಜ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಈಟಿವಿ ಕನ್ನಡ ವಾಹಿನಿಯ ಮುಖ್ಯಸ್ಥ ಶ್ರೀ ಸುಬ್ಬಯ್ಯ ನಾಯ್ಡುರವರಿಂದ ಮೆಚ್ಚುಗೆಯನ್ನು ಪಡೆದು ರಾಷ್ಟ್ರಮಟ್ಟದಲ್ಲಿ ಮಿಂಚಿದ ಪ್ರತಿಭೆಯ ಚಿಲುಮೆ.

2013ರಲ್ಲಿ ಆಲ್ ಇಂಡಿಯಾ ರೇಡಿಯೋ ಆಯೋಜಿಸಿದ ರಾಷ್ಟ್ರಮಟ್ಟದ ಸುಗಮ ಸಂಗೀತ ವಿಭಾಗದಲ್ಲಿ ಮಂಗಳೂರು ಆಕಾಶವಾಣಿಯಿಂದ ಸ್ಪರ್ಧಿಸಿ, ಭಾರತದಾದ್ಯಂತ ಸ್ಪರ್ಧಿಸಿದ ಆರೂವರೆ ಸಾವಿರಕ್ಕೂ ಅಧಿಕ ಸ್ಪರ್ಧಿಗಳನ್ನು ಮೀರಿಸಿದ ಸಂಗೀತ ಪ್ರದರ್ಶನವನ್ನು ನೀಡಿ “ಪ್ರಥಮ ಸ್ಥಾನ”ವನ್ನು ಪಡೆದು ಮತ್ತೊಮ್ಮೆ ತನ್ನ ಅಸಾಧಾರಣ ಪ್ರತಿಭೆಯನ್ನು ಅನಾವರಣಗೊಳಿಸಿದ ಕರ್ನಾಟಕ ರಾಜ್ಯದ ಅಪರೂಪದ ಪ್ರತಿಭೆ ಕುಮಾರಿ ದೀಕ್ಷಾ ರಾಮಕೃಷ್ಣರವರು.

ತನ್ನ 18ನೇಯ ಕಿರು ವಯಸ್ಸಿನಲ್ಲಿಯೇ ಭರತನಾಟ್ಯ ಅಂತಿಮ ವಿದ್ವತ್ ಪರೀಕ್ಷೆಯಲ್ಲಿ ಉನ್ನತಶ್ರೇಣಿಯಲ್ಲಿ ತೇರ್ಗಡೆಹೊಂದಿರುವ ಕುಮಾರಿ ದೀಕ್ಷಾರವರು ಸುಗಮಸಂಗೀತದಲ್ಲಿ ಆಕಾಶವಾಣಿಯ “ಬಿ” ಗ್ರೇಡ್ ಕಲಾವಿದೆಯಾಗಿ ಆಯ್ಕೆಯಾಗಿದ್ದಾರೆ. ರಾಜ್ಯದಾದ್ಯಂತ ಸುಮಾರು 350ಕ್ಕೂ ಅಧಿಕ ನೃತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಪ್ರತಿಷ್ಠಿತ ವೇದಿಕೆಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನೀಡಿರುತ್ತಾರೆ. ತನ್ನ ಹೆತ್ತವರು ಉಡುಪಿಯಲ್ಲಿ ಆರಂಭಿಸಿದ “ಹೆಜ್ಜೆ-ಗೆಜ್ಜೆ ಅಕಾಡೆಮಿ (ರಿ)” ನ 20ನೇಯ ವರ್ಷದ ವಿಂಶತಿ ಉತ್ಸವ ಕಾರ್ಯಕ್ರಮದಲ್ಲಿ “ಉದಯವಾಣಿ”ಯ ಹೆಸರಾಂತ ವಿಮರ್ಶಕರು ಮತ್ತು ಹಿರಿಯ ಸಾಹಿತಿ ಶ್ರೀ. ಈಶ್ವರಯ್ಯನವರು ರಚಿಸಿದ “ನಾದವೇ ಆನಂದವು” ಗೀತೆಗೆ ರಾಗಂ-ತಾನಂ ಪಲ್ಲವಿಗೆ ಸ್ವಯಂ ನ್ರತ್ಯ ಸಂಯೋಜನೆಯನ್ನು ಮಾಡಿ, ನೃತ್ಯಪ್ರದರ್ಶನವನ್ನು ಯಶಸ್ವಿಯಾಗಿ ನೀಡಿ, ನೆರೆದ ಸಾವಿರಾರು ಕಲಾರಸಿಕರ ಮನಸ್ಸನ್ನು ಗೆದ್ದಿದ್ದಾಳೆ.

ಕೇವಲ ನೃತ್ಯ-ಸಂಗೀತ ಮಾತ್ರವಲ್ಲದೇ, ಶೈಕ್ಷಣಿಕ ವಿಭಾಗದಲ್ಲಿಯೂ “ಸೈ” ಎನಿಸಿಕೊಂಡ ವಿದುಷಿ ಕುಮಾರಿ ದೀಕ್ಷಾ ರಾಮಕೃಷ್ಣರವರು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇಕಡಾ 91 ಅಂಕಗಳನ್ನು ಮತ್ತು ಇಂಜಿನಿಯರಿಂಗ್ ಪದವಿಯಲ್ಲಿ ಕಳೆದ ಏಳು ಸೆಮಿಸ್ಟರ್ ಪರೀಕ್ಷೆಗಳಲ್ಲಿ ಸರಾಸರಿ ಶೇಕಡಾ 77ಕ್ಕೂ ಅಧಿಕ ಅಂಕಗಳನ್ನು ಪಡೆದಿದ್ದಾರೆ. 2015ರ ಜನವರಿಯಲ್ಲಿ ಮಂಗಳೂರಿನ ಶ್ರೀನಿವಾಸ್ ಗ್ರೂಪ್ ಆಫ್ ಕಾಲೇಜು ವತಿಯಿಂದ ಬಹಳ ಅದ್ದೂರಿಯಾಗಿ ಮತ್ತು ಯಶಸ್ವಿಯಾಗಿ ಆಯೋಜಿಸಿದ ರಾಷ್ಟ್ರಮಟ್ಟದ “ಯುವ ಪರಿವರ್ತನ್-15” ಪ್ರತಿಭಾ ಕಾರ್ಯಕ್ರಮದ ಪ್ರಚಾರ ಗೀತೆಯಾದ “ಶ್ರೀನಿವಾಸ್ ಕಾಲೇಜ್ ಯುವ ಪರಿವರ್ತನ್”ಗೆ ಸಂಗೀತವನ್ನು ರಚಿಸಿ, ಸಂಯೋಜಿಸಿ, ಸುಶ್ರಾವ್ಯವಾಗಿ ಹಾಡಿ, ಶ್ರೀನಿವಾಸ್ ಗ್ರೂಪ್ ಆಫ್ ಕಾಲೇಜಿನ ಆಡಳಿತ ಮಂಡಳಿಯಿಂದ ಮತ್ತು ಸಾವಿರಾರು ವಿದ್ಯಾರ್ಥಿಗಳಿಂದ ಮೆಚ್ಚುಗೆಯನ್ನು ಗಳಿಸಿದ್ದಾರೆ ಹಾಗೂ 2014 ಮತ್ತು 2015ರಲ್ಲಿ ಸನ್ಮಾನಿತರಾಗಿದ್ದಾರೆ.

2003ನೇಯ ಇಸವಿಯಲ್ಲಿ ತನ್ನ 9ನೇಯ ಕಿರು ವಯಸ್ಸಿನಲ್ಲಿ ರಾಜ್ಯಮಟ್ಟದ ಕಲಾ ಪ್ರತಿಭೋತ್ಸವ 2003-04 ರ ಶಾಸ್ತ್ರೀಯ ನೃತ್ಯ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಪಡೆದ ಕುಮಾರಿ ದೀಕ್ಷಾರವರನ್ನು ಅಂದಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸನ್ಮಾನ್ಯ ಸಚಿವೆಯಾದ ಶ್ರೀಮತಿ ರಾಣಿ ಸತೀಶ್‍ರವರು “ಬಾಲಪ್ರತಿಭಾ” ಪ್ರಶಸ್ತಿಯನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನೀಡಿ ಸನ್ಮಾನಿಸಿದ್ದಾರೆ. ಕುಮಾರಿ ದೀಕ್ಷಾರವರು ಪಡೆದಿರುವ ನೂರಾರು ಬಹುಮಾನ, ಪುರಸ್ಕಾರ, ಪ್ರಶಸ್ತಿ, ಮತ್ತು ಸನ್ಮಾನಗಳ ಕಿರುವಿವರ ಇಲ್ಲಿದೆ:
• ವೈಜಾಕ್‍ನಲ್ಲಿ ಮದ್ರಾಸ್ ತೆಲುಗು ಆಕಾಡೆಮಿ ವತಿಯಿಂದ ದಕ್ಷಿಣ ಭಾರತ ಚಿತ್ರರಂಗದ ದಿಗ್ಗಜ ಶ್ರೀಯುತ ಅಕ್ಕಿನೇನಿ ನಾಗೇಶ್ವರ ರಾವ್‍ರವರಿಂದ ಸನ್ಮಾನ
• ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಆಯೋಜಿಸಿದ ರಾಜ್ಯಮಟ್ಟದ ಕಲಾಪ್ರತಿಭೋತ್ಸವ-2011ರಲ್ಲಿ ಕಿಶೋರ ಪ್ರತಿಭೆ ಸುಗಮ ಸಂಗೀತ ವಲಯಮಟ್ಟದ ಸ್ಪರ್ಧೆಯಲ್ಲಿ ಬಹುಮಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆ
• ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸ್ವರ್ಣ ಸೇವಾ ಸಂಸ್ಥೆ (ರಿ) ಆಯೋಜಿಸಿದ ರಾಜ್ಯಮಟ್ಟದ ಭರತನಾಟ್ಯ ಸ್ಪರ್ಧೆ “ಸ್ವರ್ಣ ನೃತ್ಯ ವೈಭವ-2011” ರಲ್ಲಿ ಉತ್ತಮ ಪ್ರದರ್ಶನ
• ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ಇದರ ವತಿಯಿಂದ ಚಿತ್ರದುರ್ಗದಲ್ಲಿ ಅಯೋಜಿಸಲಾದ ಕಲಾಪ್ರತಿಭೋತ್ಸವ-2010ರಲ್ಲಿ ವಲಯ ಮಟ್ಟದ ಸುಗಮ ಸಂಗೀತ ಸ್ಪರ್ಧೆಯಲ್ಲಿ ತೃತೀಯ ಬಹುಮಾನ
• ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಶೇಮಾಭಿವ್ರದ್ಧಿ ನಿಧಿ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ, ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ಉಡುಪಿ ಜಿಲ್ಲಾಮಟ್ಟದ ಭಾವಗೀತೆ ಗಾಯನ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ
• 2009ರಲ್ಲಿ ಉಡುಪಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಜಿಲ್ಲಾಮಟ್ಟದ “ಮಕ್ಕಳ ಪ್ರತಿಭಾ ಪುರಸ್ಕಾರ ಪ್ರಶಸ್ತಿ”
• ಉಡುಪಿ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ 2009-10ರ “ಮಕ್ಕಳ ಹಬ್ಬ” ಕಾರ್ಯಕ್ರಮದಲ್ಲಿ ಭರತನಾಟ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ
• 2009ರಲ್ಲಿ ಕುಂದಾಪುರದ ಶ್ರೀ ಮಹಾದೇವ ಸಾಂಸ್ಕೃತಿಕ ಪ್ರತಿಷ್ಠಾನ, ಮಕ್ಕಿ ದೇವಸ್ಥಾನದ ವತಿಯಿಂದ ಆಯೋಜಿಸಿದ ತೃತೀಯ ಅಂತರ್ ಜಿಲ್ಲಾ ಶಾಸ್ತ್ರೀಯ ಸಂಗೀತ ನೃತ್ಯ ಸಮ್ಮೇಳನದಲ್ಲಿ “ಶ್ರೀ ಮಹಾದೇವ ಪ್ರಶಸ್ತಿ” ಗೌರವ
• ಉಡುಪಿ ಜಿಲ್ಲಾಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸೈಂಟ್ ಸಿಸಿಲಿ ಸಮೂಹ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಉಡುಪಿ ವಲಯ ಮಟ್ಟದ ಪ್ರತಿಭಾ ಕಾರಂಜಿ-2009ರಲ್ಲಿ ಪ್ರೌಢಶಾಲಾ ವಿಭಾಗದ “ಪ್ರತಿಭಾ ಕಾರಂಜಿ” ಕಾರ್ಯಕ್ರಮದ ಭರತನಾಟ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ
• 2008ರಲ್ಲಿ ಭಾರತ ವಿಕಾಸ ಪರಿಷತ್, ನವದೆಹಲಿ ವತಿಯಿಂದ ಆಯೋಜಿಸಲಾದ ರಾಷ್ಟ್ರಮಟ್ಟದ ದೇಶಭಕ್ತಿಗೀತೆ ಮತ್ತು ಜಾನಪದಗೀತೆ ಸಮೂಹಗಾಯನ ಸ್ಪರ್ಧೆಗಳಲ್ಲಿ ದ್ವಿತೀಯ ಬಹುಮಾನ ಮತ್ತು “ರಾಷ್ಟ್ರಮಟ್ಟದ ಪ್ರಶಂಸಾ ಪತ್ರ”
• 2008ರಲ್ಲಿ ಭಾರತ ಸರಕಾರದ ಸಂಸ್ಕೃತಿ ಸಚಿವಾಲದ ಅಧೀನದಲ್ಲಿರುವ ಸಾಂಸ್ಕೃತಿಕ ಸಂಪನ್ಮೂಲ ಮತ್ತು ತರಬೇತಿ ಕೇಂದ್ರ, ನವದೆಹಲಿ ವತಿಯಿಂದ “ಸಾಂಸ್ಕೃತಿಕ ಪ್ರತಿಭಾ ಶೋಧ ವಿದ್ಯಾರ್ಥಿವೇತನ”
• ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ಇದರ ವತಿಯಿಂದ ಶಿವಮೊಗ್ಗದಲ್ಲಿ ಅಯೋಜಿಸಲಾದ ಕಲಾಪ್ರತಿಭೋತ್ಸವ-2007ರಲ್ಲಿ ವಲಯ ಮಟ್ಟದ ಸುಗಮ ಸಂಗೀತ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ
• 2007ರಲ್ಲಿ ಉಡುಪಿ ಜಿಲ್ಲಾಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಉಡುಪಿ ಜಿಲ್ಲೆ ಇದರ ವತಿಯಿಂದ ಆಯೋಜಿಸಿದ ಜಿಲ್ಲಾಮಟ್ಟದ ನಾಡಗೀತೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ
• 2007ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿಯಲ್ಲಿ ಆಯೋಜಿಸಿದ 74ನೆಯ ಅಖಿಲ ಭಾರತ್ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ ಮತ್ತು ಪ್ರಶಂಸಾ ಪತ್ರ ಪ್ರಧಾನ
• 2006ರಲ್ಲಿ ಕುಂದಾಪುರದ ಶ್ರೀ ಮಹಾಲಿಂಗೇಶ್ವರ ಸಂಸ್ಕ್ರತ ವಿದ್ಯಾಪೀಠಂ ವತಿಯಿಂದ ಆಯೋಜಿಸಿದ ಬೃಹತ್ ಅಂತರ್ ಜಿಲ್ಲಾ ಪ್ರತಿಭಾ ಸನ್ಮಾನ ಸಮ್ಮೇಳನದಲ್ಲಿ “ಶ್ರೀ ಮಹಾದೇವಾ ಪ್ರಶಸ್ತಿ” ಪ್ರಧಾನ
• 2006ರಲ್ಲಿ ತನ್ನ 12ನೇಯ ಕಿರು ವಯಸ್ಸಿನಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಬೆಂಗಳೂರು ವತಿಯಿಂದ ಭರತನಾಟ್ಯ ಸೀನಿಯರ್ ವಿಭಾಗದಲ್ಲಿ ಶಿಷ್ಯ ವೇತನಕ್ಕೆ ಆಯ್ಕೆಗೊಂಡ ಸಾಧನೆ
• 2006ರಲ್ಲಿ ಉಡುಪಿ ಜಿಲ್ಲಾಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಉಡುಪಿ ವಲಯ ಆಯೋಜಿಸಿದ ಸುವರ್ಣ ಪ್ರತಿಭಾ ಕಾರಂಜಿ ನಾಡಗೀತೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಮತ್ತು ಅಭಿನಯ ಗೀತೆಯಲ್ಲಿ ತೃತೀಯ ಸ್ಥಾನ
• 2006ರಲ್ಲಿ ಶ್ರೀ ವಾದಿರಾಜ ಸಂಕೀರ್ತನ ಸಮಿತಿ ಉಡುಪಿ, ಪರ್ಯಾಯ ಶ್ರೀ ಕೃಷ್ಣಾಪುರ ಮಠ ಉಡುಪಿ, ನಂಜನಗೂಡು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠ ಉಡುಪಿ, ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲ ಇವರ ಸಹಯೋಗದಲ್ಲಿ ಜರಗಿದ ಶ್ರೀ ವಾದಿರಾಜಯತಿ ವಿರಚಿತ ಕೀರ್ತನೆಗಳನ್ನು ಹಾಡುವ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಮತ್ತು ಪ್ರಶಂಸಾ ಪತ್ರ
• 2005ರಲ್ಲಿ ಉಡುಪಿ ಜಿಲ್ಲಾಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಉಡುಪಿ ವಲಯ ಆಯೋಜಿಸಿದ ಅಭಿನಯ ಗೀತೆಯಲ್ಲಿ ತೃತೀಯ ಬಹುಮಾನ
• 2005ರಲ್ಲಿ ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿ, ಬೆಂಗಳೂರು ವತಿಯಿಂದ ಏರ್ಪಡಿಸಿದ “ಯುವ ಪ್ರತಿಭಾ ಪುನಶ್ಚೇತನ” ಹಾಗೂ “ಯುವ ಪ್ರತಿಭಾ ದರ್ಶನ” ದಲ್ಲಿ ಉತ್ತಮ ಪ್ರದರ್ಶನ
• 2005ರಲ್ಲಿ ಮಂಡ್ಯದ ಗುರುದೇವಾ ಲಲಿತಕಲಾ ಅಕಾಡೆಮಿ (ರಿ) ಅಯೋಜಿಸಿದ ಅದ್ದೂರಿ ವರ್ಣರಂಜಿತ ಕಾರ್ಯಕ್ರಮದಲ್ಲಿ ಕರ್ನಾಟಕ ಕಲಾಶ್ರೀ ಖ್ಯಾತಿಯ ಡಾ.ಎಂ.ಸೂರ್ಯಪ್ರಸಾದ್‍ರವರಿಂದ ರಾಜ್ಯಮಟ್ಟದ “ನಾಟ್ಯ ಮಂದಾರ” ಪ್ರಶಸ್ತಿ ಸ್ವೀಕಾರ
• 2005ರಲ್ಲಿ ಕನ್ನಡ ಮಕ್ಕಳ ಮನೆ ಬೆಂಗಳೂರು ಮತ್ತು ಕಲಾ ವಿಕಾಸ ಪರಿಷತ್ ಗದಗ ವತಿಯಿಂದ ರಾಜ್ಯಮಟ್ಟದ “ಬಾಲ ಕಲಾ ಗಂಧರ್ವ ರತ್ನ” ಮತ್ತು “ಬಾಲ ವಿಕಾಸ ಶ್ರೀ” ಪ್ರಶಸ್ತಿ
• 2005ರಲ್ಲಿ ಜ್ಞಾನಮಂದಾರ ಅಕಾಡೆಮಿ, ಬೆಂಗಳೂರು ವತಿಯಿಂದ ರಾಜ್ಯಮಟ್ಟದ “ಅರಳು ಮಲ್ಲಿಗೆ” ಮತ್ತು “ಕಲಾಶ್ರೀ” ಪ್ರಶಸ್ತಿ
• 2005ರಲ್ಲಿ ತನ್ನ ಹತ್ತನೆಯ ಕಿರು ವಯಸ್ಸಿನಲ್ಲಿ ಅಂತರಾಷ್ಟ್ರೀಯ ಖ್ಯಾತಿಯ ನೃತ್ಯ ಕಲಾವಿದೆ ಪದ್ಮವಿಭೂಷಣ ಡಾ. ಸೋನಾಲ್ ಮಾನ್ ಸಿಂಗ್‍ರವರಿಂದ “ಏಕಕಾಲದಲ್ಲಿ ಸಂಗೀತ ಮತ್ತು ನಟುವಾಂಗ ನಿಭಾಯಿಸುವ ಸಮರ್ಥನಾ ಪ್ರಶಂಸಾ ಪತ್ರ”
• 2005ರಲ್ಲಿ ಉಡುಪಿ ನಗರಸಭೆ ವತಿಯಿಂದ ಸ್ವಾತಂತ್ರೋತ್ಸವ ದಿನಚರಣೆ-ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪತ್ರ
• 2005ರಲ್ಲಿ ಉಡುಪಿ ಜಿಲ್ಲಾಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಉಡುಪಿ ಉತ್ತರ ವಲಯ ಆಯೋಜಿಸಿದ ಲಘು ಸಂಗೀತ ಸ್ಪರ್ಧೆ ಮತ್ತು ನಾಡಗೀತೆ ಸ್ಪರ್ಧೆಗಳಲ್ಲಿ ದ್ವಿತೀಯ ಸ್ಥಾನ
• 2004ರಲ್ಲಿ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉಡುಪಿ ಜಿಲ್ಲೆ ಇದರ ವತಿಯಿಂದ ಆಯೋಜಿಸಿದ ಕಲಾಪ್ರತಿಭೋತ್ಸವ ಸುಗಮ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ
• 2004ರಲ್ಲಿ ದ.ಕ. ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮ (ರಿ), ಮಂಗಳೂರು ಆಯೋಜಿಸಿದ ದೇಶಭಕ್ತಿ ಮತ್ತು ಭಾವಗೀತೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ
• 2004ರಲ್ಲಿ ಮಣಿಪಾಲ್ ಹಿಲ್ ಸಿಟಿ ಜೇಸೀಸ್ ಆಯೋಜಿಸಿದ ಶಾಸ್ತ್ರೀಯ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ
• 2004ರಲ್ಲಿ ಪರ್ಯಾಯ ಶ್ರೀ ಅದಮಾರು ಮಠ, ಶ್ರೀಕೃಷ್ಣ ಮಠ ಆಯೋಜಿಸಿದ “ದಾಸರು ಕಂಡಂತೆ ಶ್ರೀಕೃಷ್ಣನ ಕೀರ್ತನ ಸ್ಪರ್ಧೆ”ಯಲ್ಲಿ ದ್ವಿತೀಯ ಬಹುಮಾನ
• 2003ರಲ್ಲಿ ಬೆಂಗಳೂರಿನಲ್ಲಿ ಆಯೋಜಿಸಲಾದ ಗೋಪಿನಾಥದಾಸ ನ್ಯಾಸ ಸ್ಮಾರಕ ರಾಜ್ಯ ಮಟ್ಟದ ಭರತನಾಟ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಮತ್ತು ಚಿನ್ನದ ಪದಕ
• 2003ರಲ್ಲಿ ರೋಟರಾಕ್ಟ್ ಕ್ಲಬ್ ಉಡುಪಿ-ಮಣಿಪಾಲದ ವತಿಯಿಂದ “ದಿ ಮೋಸ್ಟ್ ಟ್ಯಾಲೆಂಟೆಡ್ ಚೈಲ್ಡ್” ಪ್ರಶಸ್ತಿ
• 2003ರಲ್ಲಿ ಉಡುಪಿ ಜಿಲ್ಲಾಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಉಡುಪಿ ಉತ್ತರ ವಲಯ ಆಯೋಜಿಸಿದ ಪ್ರತಿಭಾ ಕಾರಂಜಿ ಲಘು ಸಂಗೀತ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಮತ್ತು ಪ್ರಶಸ್ತಿ ಪತ್ರ
• 2003ರಲ್ಲಿ ಉದ್ಯಾವರ ಗೆಳೆಯರ ಬಳಗದಿಂದ ಸನ್ಮಾನ
• 2002ರಲ್ಲಿ ರೋಟರಾಕ್ಟ್ ಕ್ಲಬ್ ಉಡುಪಿ ಆಯೋಜಿಸಿದ ಸಂಗೀತ ಸ್ಪರ್ದೆಯಲ್ಲಿ ಪ್ರಥಮ ಸ್ಥಾನ
• 2002ರಲ್ಲಿ ಮಣಿಪಾಲ್ ಹಿಲ್ ಸಿಟಿ ಜೇಸೀಸ್ ಆಯೋಜಿಸಿದ ಶಾಸ್ತ್ರೀಯ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ
• ಶಾಂತಲಾ ಪ್ರಶಸ್ತಿ ಪುರಸ್ಕೃತೆ ಶ್ರೀಮತಿ ಜಯಲಕ್ಷ್ಮೀ ಆಳ್ವರಿಂದ “ಸಂಗೀತ ಮತ್ತು ನಟುವಾಂಗ ನಿಭಾಯಿಸುವ ಸಮರ್ಥನಾ ಪ್ರಶಂಸಾ ಪತ್ರ”
• ಕರ್ನಾಟಕ ಸರಕಾರದಿಂದ ಎರಡು ವಿಭಾಗಗಳಲ್ಲಿ “ಬಾಲಪ್ರತಿಭೆ” ಪ್ರಶಸ್ತಿಯನ್ನು ಪ್ರಥಮವಾಗಿ ಪಡೆದ ಸಾಧನೆ
• ನವ್ಯ ನಾಟಕ ಸಮಿತಿ, ಹೈದರಾಬಾದ್ ರವರು ಆಯೋಜಿಸಿದ ರಾಷ್ಟ್ರಮಟ್ಟದ ಭರತನಾಟ್ಯ ಸ್ಪರ್ಧೆಯಲ್ಲಿ ಜೂನಿಯರ್ ವಿಭಾಗದಲ್ಲಿ ತೃತೀಯ ಬಹುಮಾನ
• “ನಾಡಗೀತೆ” ಸ್ಪರ್ಧೆಯ ಪ್ರತಿಭಾಕಾರಂಜಿಯಲ್ಲಿ ರಾಜ್ಯಕ್ಕೆ ಪ್ರಥಮ ಬಹುಮಾನ
• ಜಗದ್ಗುರು ಶ್ರೀ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನಮ್, ಪರ್ಯಾಯ ಶ್ರೀ ಪಲಿಮಾರು ಹೃಷೀಕೇಶ ಮಠದ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಶುಭ ಸಂದರ್ಭದಲ್ಲಿ ಆಯೋಜಿಸಿದ “ಶ್ರೀಕೃಷ್ಣ ನೃತ್ಯಾಭಿನಯ” ಮತ್ತು “ಶ್ರೀಕೃಷ್ಣ ದೇವರನಾಮ” ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನಗಳನ್ನು ಪಡೆದು ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ದಿವ್ಯ ಹಸ್ತದಿಂದ ಬಹುಮಾನ ಮತ್ತು “ಪ್ರಥಮ ಶ್ರೀಕೃಷ್ಣಾನುಗ್ರಹ” ಪ್ರಶಸ್ತಿ ಪತ್ರ
• ವಿವಿಧ ಸಂಘ-ಸಂಸ್ಥೆಗಳು ಆಯೋಜಿಸಿದ ರಾಜ್ಯ ಮಟ್ಟದ ಭರತನಾಟ್ಯ ಸ್ಪರ್ಧೆಯಲ್ಲಿ ಅನೇಕ ಬಾರಿ ಪ್ರಥಮ ಬಹುಮಾನ
• ಹತ್ತಕ್ಕೂ ಹೆಚ್ಚು ಬಾರಿ ಪ್ರತಿಷ್ಠಿತ ವೇದಿಕಗಳಲ್ಲಿ “ಏಕ ವ್ಯಕ್ತಿ” ಭರತನಾಟ್ಯ ಪ್ರದರ್ಶನ
• “ಹೆಜ್ಜೆ-ಗೆಜ್ಜೆ ನೃತ್ಯ ಅಕಾಡೆಮಿ (ರಿ), ಉಡುಪಿ” ಸಂಸ್ಥೆ ವತಿಯಿಂದ 500ಕ್ಕೂ ಅಧಿಕ ಸಮೂಹ ನೃತ್ಯ ಪ್ರದರ್ಶನ

ಕುಮಾರಿ ದೀಕ್ಷಾ ರಾಮಕೃಷ್ಣರವರು “ಝೀ ಕನ್ನಡ” ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪ್ರಸಿದ್ಧ ಧಾರಾವಾಹಿ “ಶುಭವಿವಾಹ” ದಲ್ಲಿ “ಸವಿತಾ” ಪಾತ್ರದಲ್ಲಿ ಉತ್ತಮ ನಟನೆಯ ಮೂಲಕ ಮೆಚ್ಚುಗೆಯನ್ನು ಗಳಿಸಿದ್ದಾರೆ. ಜನವರಿ 2016 ರಲ್ಲಿ ಉಡುಪಿಯ ರವೀಂದ್ರ ಕಲಾಮಂಟಪದಲ್ಲಿ ವಿದುಷಿ ಯಶಾ ರಾಮಕೃಷ್ಣರವರು ಪ್ರಸ್ತುತಪಡಿಸಿದ ವಿನೂತನ ಭರತನಾಟ್ಯ ಕಾರ್ಯಕ್ರಮ “ರಸೋತ್ಕರ್ಷ” ದಲ್ಲಿ ರಸಾಯನ ಶಾಸ್ತ್ರದ ವಿವಿಧ ಆಯಾಮಗಳನ್ನು ನಾಟ್ಯದಲ್ಲಿ ಯಶಸ್ವಿಯಾಗಿ ಅಳವಡಿಸಿ, ಉತ್ತಮ ಪ್ರದರ್ಶನವನ್ನು ನೀಡಿರುತ್ತಾರೆ. ಈಟಿವಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ “ಚಿಗುರು ಕಾರ್ಯಕ್ರಮ” ಹಾಗೂ ಇತರ ರಾಷ್ಟ್ರೀಯ ವಾಹಿನಿಗಳಲ್ಲಿ ಪ್ರಸಾರವಾದ ನೃತ್ಯ ಕಾರ್ಯಕ್ರಮಗಳು ಸೇರಿದಂತೆ ಸುಧಾ, ತರಂಗ, ಟೈಮ್ಸ್ ಆಫ್ ಇಂಡಿಯಾ, ಡೆಕ್ಕನ್ ಹೆರಾಲ್ಡ್, ಉದಯವಾಣಿ, ವಿಜಯ ಕರ್ನಾಟಕ, ಹಿಂದೂ, ಪ್ರಜಾವಾಣಿ, ಹೊಸದಿಗಂತ ಹಾಗೂ ಇನ್ನಿತರ ಹಲವಾರು ನಿಯತಕಾಲಿಕೆ ಮತ್ತು ಸುದ್ದಿಮಾಧ್ಯಮಗಳಲ್ಲಿ ನೃತ್ಯ ಮತ್ತು ಸಂಗೀತದ ಕಲೆಯ ಮೂಲಕ ವ್ಯಾಪಕ ಪ್ರಚಾರವನ್ನು ಕುಮಾರಿ ದೀಕ್ಷಾ ರಾಮಕೃಷ್ಣರವರು ಪಡೆದಿದ್ದಾರೆ. ಶೈಕ್ಷಣಿಕ ಹಾಗೂ ನೃತ್ಯ-ಸಂಗೀತ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಯನ್ನು ಮಾಡಿರುವ ಕುಮಾರಿ ದೀಕ್ಷಾ ರಾಮಕೃಷ್ಣರವರ ಪ್ರತಿಭೆಯನ್ನು ಗಮನಿಸಿ, ಮಂಗಳೂರಿನ ಎ. ಶಾಮ ರಾವ್ ಪ್ರತಿಷ್ಠಾನದ ಸನ್ಮಾನ್ಯ ಅಧ್ಯಕ್ಷರಾದ ಹಿರಿಯ ಚಾರ್ಟೆಡ್ ಅಕೌಂಟೆಂಟ್ ಶ್ರೀಯುತ ಸಿಎ. ಎ. ರಾಘವೇಂದ್ರ ರಾವ್‍ರವರು ತಮ್ಮ ಸಮೂಹ ಶಿಕ್ಷಣ ಸಂಸ್ಥೆಗೆ ಸೇರಿದ ಮುಕ್ಕದಲ್ಲಿರುವ ಶ್ರೀನಿವಾಸ್ ಸ್ಕೂಲ್ ಆಫ್ ಇಂಜಿನಿಯರಿಂಗ್‍ನಲ್ಲಿ ಬಿ.ಇ (ಕಂಪ್ಯೂಟರ್ ಸೈನ್ಸ್ ಆಂಡ್ ಇಂಜಿನಿಯರಿಂಗ್) ವ್ಯಾಸಂಗಕ್ಕೆ ಉಚಿತ ಪ್ರವೇಶವನ್ನು ನೀಡಿ ಕುಮಾರಿ ದೀಕ್ಷಾಳನ್ನು ಪೆÇ್ರೀತ್ಸಾಹಿಸಿ ತಮ್ಮ ಕಲಾಭಿಮಾನವನ್ನು ಮೆರೆದಿದ್ದಾರೆ.

ಸಂಸ್ಕೃತದ “ಸುಭಾಷಿತ”ದಲ್ಲಿ ಒಂದು ಉಲ್ಲೇಖವಿದೆ: “ಯಥಾ ಖನನ್ ಖನಿತ್ರೇಣ ನರೋ ವಾರ್ಯಧಿಗಛ್ಛಸಿ, ತಥಾ ಗುರುಗತಾಂ ವಿಧ್ಯಾಂ ಶಿಷ್ಯ: ಷುಶ್ರೂಶಧಿಗಛ್ಛಸಿ”. ಈ ಸುಭಾಷಿತದಲ್ಲಿ ಹೇಳಿದಂತೆ ಏಕಾಗ್ರತೆ, ಸತತ ಕಠಿಣ ಪರಿಶ್ರಮ ಮತ್ತು ಹೆತ್ತವರ-ಗುರುಗಳ ಮಾರ್ಗದರ್ಶನದಲ್ಲಿ ಉತ್ತಮವಾಗಿ ಕಲಾಭ್ಯಾಸವನ್ನು ಮಾಡಿ, ತನ್ನ ವಿದ್ಯಾರ್ಥಿ ಜೀವನದಲ್ಲಿ ಗುರುಗಳು ಉಪದೇಶಿಸಿದ ಸಲಹೆಗಳನ್ನು ಅಳವಡಿಸಿ, ತನ್ನ ವಯಸ್ಸಿಗೂ ಮೀರಿದ ಬಹಳಷ್ಟು ಸಾಧನೆಯನ್ನು ಮಾಡಿರುವ ಮತ್ತು ಮಾಡುತ್ತಿರುವ ವಿದುಷಿ ಕುಮಾರಿ ದೀಕ್ಷಾ ರಾಮಕೃಷ್ಣರವರು ಇಂದಿನ ಈ ಪಾಶ್ಚಾತ್ಯ ನೃತ್ಯ-ಸಂಗೀತದ ಪೈಪೆÇೀಟಿಯ ನಡುವೆಯೂ ನೂರಾರು ಮಕ್ಕಳನ್ನು ಭಾರತೀಯ ಶಾಸ್ತ್ರೀಯ ನೃತ್ಯ ಪರಂಪರೆಯ ಕಡೆಗೆ ಆಕರ್ಷಿಸಿ, ಪ್ರೇರೇಪಿಸಿ, ಅವರಿಗೆ ನೃತ್ಯ-ಸಂಗೀತದ ಕಲೆಯನ್ನು ಕಲಿಸಿ, ಕಲೆಯನ್ನು ಪೆÇೀಷಿಸಿ ಬೆಳೆಸಿಕೊಂಡು ಹೋಗುವ ಮಹತ್ತರವಾದ ಕಾಯಕದಲ್ಲಿ ತೊಡಗಿದ್ದರೆ. ಭವಿಷ್ಯದಲ್ಲಿ ಕುಮಾರಿ ದೀಕ್ಷಾರವರು ನೃತ್ಯ ಮತ್ತು ಸಂಗೀತ, ಈ ಎರಡೂ ಕಲಾ ಕ್ಷೇತ್ರಗಳಲ್ಲಿ ಇನ್ನೂ ಮಹತ್ತರವಾದ ಸಾಧನೆಯನ್ನು ಮಾಡಿ, ಯಶಸ್ಸಿನ ಶಿಖರದ ಕಡೆಗೆ ತನ್ನ ಯಶೋಗಾಥೆಯನ್ನು ಮುಂದುವರಿಸಿಕೊಂಡು, ಮತ್ತಷ್ಟು ಖ್ಯಾತಿಯನ್ನು ಪಡೆಯುವಂತಾಗಲಿ ಎಂದು ಶುಭವನ್ನು ಕೋರಿ, ನಮ್ಮ ಈ ಶೈಕ್ಷಣಿಕ ಸಂಸ್ಥೆಗೆ ಮತ್ತಷ್ಟು ಕೀರ್ತಿಯನ್ನು ತರಲಿ ಎನ್ನುವುದು ನಮ್ಮೆಲ್ಲರ ಆಶಯ.

ಬರಹ: ಶ್ರೀನಾಥ್ ರಾವ್ ಕೆ., ಅಸೋಸಿಯೇಟ್ ಪೆÇ್ರಫೆಸರ್,
ಸಿವಿಲ್ ಇಂಜಿನಿಯರಿಂಗ್ ವಿಭಾಗ, ಶ್ರೀನಿವಾಸ್ ಸ್ಕೂಲ್ ಆಫ್ ಇಂಜಿನಿಯರಿಂಗ್,
ಮುಕ್ಕ, ಮಂಗಳೂರು.